ನವೆಂಬರ್ ಬಂತೆಂದರೆ ಕನ್ನಡಿಗರಿಗೆಲ್ಲರಿಗೂ ಹುರುಪು, ರಾಜ್ಯೋತ್ಸವದ ಸಂಭ್ರಮ. ಎಲ್ಲೆಡೆ ಹಳದಿ ಕೆಂಪು ಬಣ್ಣಗಳಿಂದ ತುಂಬಿದ ರೋಮಾಂಚನ, ಕನ್ನಡವೆಂದರೆ ಬರಿ ಕರ್ನಾಟಕವಲ್ಲ ಅಸೀಮ ಅದಿಗಂತವೆಂಬಂತೆ ಸಾಗರದಾಚೆ ಕನ್ನಡ ಹಬ್ಬದ ಉತ್ಸಾಹ ಇನಿತು ಹೆಚ್ಚೇ ಇರುತ್ತದೆ. ಕನ್ನಡಕೂಟ ಲಕ್ಸಂಬರ್ಗ್ ಕನ್ನಡೋತ್ಸವವನ್ನು ಆಚರಿಸಿ ಅದರೊಟ್ಟಿಗೆ ಪಟ್ಲ ಫೌಂಡೇಶನ್ ಇ.ವಿ. ತಂಡದ ವತಿಯಿಂದ ಬಿಲ್ಲಹಬ್ಬ ಯಕ್ಷಗಾನವನ್ನು ನಡೆಸಿಕೊಟ್ಟಿದೆ.
ಯಕ್ಷಗಾನ ಗುರು ಅಜಿತ್ ಪ್ರಭು ಹಾಗೂ ನರೇಂದ್ರ ಶೆಣೈರವರಿಂದ ಯಕ್ಷಧ್ರುವ ಪಟ್ಲ ಫೌಂಡೇಶನ್‌ನ ಯುರೋಪ್ ಘಟಕ ಉದ್ಘಾಟನೆಯಾಗಿ, ‘ಯಕ್ಷ ಶಿಕ್ಷಣ’ ಪರಿಕಲ್ಪನೆಯ ಅಡಿ ಕಲಿಕಾಸಕ್ತರಿಗೆ ಯಕ್ಷಗಾನವನ್ನು ಕಲಿಸುತ್ತಾ ಅದನ್ನು ವೇದಿಕೆಗಳಲ್ಲಿ ಪ್ರದರ್ಶಿಸುತ್ತಾ ಯಶಸ್ವಿಯಾಗಿ ಮುನ್ನಡೆಯುತ್ತಿದೆ. ವಿಶೇಷ ವೇಷಭೂಷಣ, ನೃತ್ಯ, ಸಂಭಾಷಣೆಯ ಸಂಯೋಜನೆಯಲ್ಲಿ ರಾಮಾಯಣ, ಮಹಾಭಾರತ ಪ್ರಸಂಗಗಳನ್ನು ಮನೋಜ್ಞವಾಗಿ ನೋಡುಗರಿಗೆ ತಲುಪಿಸಲಾಗುತ್ತದೆ.
ಬಿಲ್ಲಹಬ್ಬವು ಪೌರಾಣಿಕ ಕಥಾ ಹಿನ್ನಲೆಯನ್ನು ಹೊಂದಿದ್ದು , ಶೌರ್ಯ ಪ್ರದರ್ಶನಕ್ಕೆ ಸಂಬಂಧಪಟ್ಟ ಒಂದು ಕಾರ್ಯಕ್ರಮ. ಕಂಸನ ಹತ್ತಿರ ಪ್ರತೀ ದಿನವು ಪೂಜಿಸಲಾಗುತ್ತಿದ್ದ ಬೃಹತ್ ಗಾತ್ರದ ಒಂದು ಧನಸ್ಸು ಇತ್ತು. ಇದನ್ನು ಒಂದು ದೊಡ್ಡ ಪೆಟ್ಟಿಗೆಯೊಳಗೆ ಇಡಲಾಗುತ್ತಿತ್ತು, ಈ ಬಿಲ್ಲನ್ನು ವರ್ಷಕ್ಕೊಮ್ಮೆ ಕಂಸನು ಶೌರ್ಯ ಪ್ರದರ್ಶನಕ್ಕಾಗಿ ಬಳಸುತ್ತಿದ್ದನು. ಪೆಟ್ಟಿಗೆಯಲ್ಲಿರುವ ಬಿಲ್ಲನ್ನು ಬಿಲ್ಲಾಳುಗಳು ತೆಗೆದು ನೇರವಾಗಿ ನಿಲ್ಲಿಸಿ ಅದರ ಎದೆ ಏರಿಸಬೇಕೆಂಬುದು ಬಿಲ್ಲಹಬ್ಬದ ಪ್ರಕ್ರಿಯೆ.
ಮಧುರೆ ರಾಜನಾದ ಕಂಸ ತನ್ನ ಸೋದರಿ ದೇವಕಿ-ವಸುದೇವರ ಅಷ್ಟಮ ಪುತ್ರನಿಂದಲೇ ತನ್ನ ಅಂತ್ಯ ಎಂದು ತಿಳಿದು, ದೇವಕಿಯ ಎಲ್ಲ ಶಿಶುಗಳನ್ನು ಕೊಲ್ಲುವ ಕಂಸ, ಕೃಷ್ಣನನ್ನು ಕೊಲ್ಲಲು ಮಾಡುವ ಪ್ರಯತ್ನಗಳೆಲ್ಲವೂ ವ್ಯರ್ಥವಾಗತೊಡಗಿತು. ಕೃಷ್ಣನು ಬೆಳೆಯುತ್ತಿದ್ದಂತೆ ಅವನ
ಲೀಲೆಗಳು ಕಂಸನ ಕಿವಿಗೆ ಬೀಳತೊಡಗಿದವು, ಹಾಗಾಗಿ ಮಥುರಾ ನಗರದಲ್ಲಿ ಸಾಂಪ್ರದಾಯಿಕವಾಗಿ ನಡೆಯುತ್ತಿದ್ದ ಬಿಲ್ಲಹಬ್ಬದ ಸಂದರ್ಭದಲ್ಲಿ ಕೃಷ – ಬಲರಾಮರಿಗೆ
ಅಕ್ರೂರನಿಂದ ಆಹ್ವಾನವನ್ನು ಕಳುಹಿಸಿ ಕೊಲ್ಲಲು ನಡೆಸುವ ಸಂಚು ಮತ್ತು ಅದನ್ನು ಅರಿತ ಕೃಷ್ಣ- ಬಲರಾಮನಿಂದಲೇ ಕಂಸನ ಅಂತ್ಯವಾಗುವ ಕಥಾ ಹಂದರವನ್ನು ಯಕ್ಷಗಾನದ ಮೂಲಕ ಪ್ರದರ್ಶಿಸಲಾಯಿತು.
ಕೃಷ್ಣನಾಗಿ ಅಜಿತ್ ಪ್ರಭು ತಲ್ಲೂರು, ಬಲರಾಮನಾಗಿ ಅಥರ್ವ್ ರಾವ್, ಕಂಸನಾಗಿ ಬೆಲ್ಜಿಯಂನ ಕಿಶೋರ್ ಕುಮಾರ್, ರಜಕನ ಪಾತ್ರದಲ್ಲಿ ಅರವಿಂದ್ ಸುಬ್ರಹ್ಮಣ್ಯ, ಕೃಷ್ಣಾವತಾರ ವೇಷದಲ್ಲಿ ಆದಿಶೇಷ ಅರವಿಂದ ಬಾಯಾರಿ, ಖುಷಿ ಶೆಣೈ, ಸ್ನಿಗ್ಧಾ ಚೌಹಾನ್ ನೆರೆದವರನ್ನು ರೋಮಾಂಚನಗೊಳಿಸಿದರು. ದುಃಸ್ವಪ್ನದಿಂದ ಬೆದರಿದ ಕಂಸ ಭಯದೊಂದಿಗೆ ನೆಲಕ್ಕುರುಳಿ ಅದರಿಂದ ಕೃಷ್ಣ-ಬಲರಾಮರನ್ನು ಕೊಲ್ಲುವ ಸಂಚು ಹೂಡುವ ಮನಸ್ಥಿತಿಯನ್ನು ತೋರಿದರೆ ಕೃಷ್ಣನಾಗಿ ಅಜಿತ್ ರವರು ತಂತ್ರಕ್ಕೆ ಪ್ರತಿತಂತ್ರ ಹೂಡುವ, ನಿರರ್ಗಳ ಸಂಭಾಷಣೆಯಿಂದ ನೋಡುಗರನ್ನು ಹಿಡಿದಿಟ್ಟರು. ಮತ್ಸ್ಯ, ಕೂರ್ಮ, ವರಹ,
ನರಸಿಂಹ, ವಾಮನ, ಪರಶುರಾಮ, ರಾಮ, ಅನಂತರ
ಕೃಷ್ಣನಾಗಿ ಶ್ರೀಹರಿಯೇ ಬಂದಿದ್ದಾನೆ ಅನ್ನುವ ಸೂಚನೆ ಕಂಸನ ಕನಸಲ್ಲಿ ಬರುವ ಸನ್ನಿವೇಶವನ್ನು ಅಭಿನಯಿಸಿ ಪುಟಾಣಿಗಳು ನೆರೆದವರ ಚಪ್ಪಾಳೆ ಗಿಟ್ಟಿಸಿದರು. ರಜಕನ ಪಾತ್ರದಲ್ಲಿ
ಆರವಿಂದ್ ರವರು ಹಾಸ್ಯದ ಹೊನಲನ್ನು ಹರಿಸಿದರು. ಒಟ್ಟಾರೆಯಾಗಿ ಯಕ್ಷಧ್ರುವ ಪಟ್ಲ ಫೌಂಡೇಶನ್ ನ ವತಿಯಿಂದ ಮತ್ತೊಂದು ಯಶಸ್ವಿ ಪ್ರದರ್ಶನ ಪ್ರೇಕಕರ ಮೆಚ್ಚುಗೆ ಪಡೆಯಿತು.
ಯಕ್ಷಗಾನದ ಬಡಗುತಿಟ್ಟಿನ ಹೆಸರಾಂತ ಭಾಗವತರು ಜನ್ಸಾಲೆ ರಾಘವೇಂದ್ರ ಆಚಾರ್ಯರವರ ಮುದ್ರಿತ ಹಿಮ್ಮೇಳದೊಂದಿಗೆ ಒಂದು ಸುಂದರ ಪ್ರದರ್ಶನ ಆಚ್ಚುಕಟ್ಟಾಗಿ ಮೂಡಿಬರಲು ಸ್ವಾತಿ ಅಜಿತ್ ಪ್ರಭು, ರೇಷ್ಮಾ ಅರವಿಂದ್, ರಶ್ಮಿ ಸುಹಾಸ್, ರಾಧಿಕಾ ಶೆಣೈರವರು ಸ್ವಯಂ ಸೇವಕರಾಗಿ ಸಹಾಯಹಸ್ತ ನೀಡಿದರು. ಅಂತಿಮವಾಗಿ ಮಾತನಾಡಿದ ಅಜಿತ್ ರವರು ರಾಜ್ಯೋತ್ಸವದಂತಹ ಕಾರ್ಯಕ್ರಮಗಳಲ್ಲಿ ಯಕ್ಷಗಾನದಂತಹ ಕಲೆಯನ್ನು ಪ್ರದರ್ಶಿಸುವುದು ಒಂದು ಶೋಭೆ. 2018ರಿಂದ ಪ್ರದರ್ಶನವನ್ನು ನೀಡುತ್ತಾ ಬಂದಿದ್ದು ಜರ್ಮನಿಯಲ್ಲಿ 13-14 ಕಲಾವಿದರು ಇಂದು ಯಕ್ಷಗಾನ ಮಾಡಲು ಸಮರ್ಥರಾಗಿದ್ದಾರೆ. ಜರ್ಮನಿಯ ಹಲವಾರು ನಗರಗಳಿಂದ ಕಲಿಕಾರ್ಥಿಗಳಿರುವುದರಿಂದ ಅವರನ್ನೆಲ್ಲ ಒಟ್ಟುಗೂಡಿಸುವುದು, ಪ್ರದರ್ಶನಕ್ಕಾಗಿ ಸಿದ್ಧಗೊಳ್ಳುವುದು ಒಂದು ಸವಾಲೇ ಸರಿ. ಇಂತಹ ಕಲೆಯನ್ನು ಪ್ರದರ್ಶಿಸಲು ಅವಕಾಶ ನೀಡಿದ ಎಲ್ಲರಿಗೂ ಧನ್ಯವಾದಗಳನ್ನು
ಅರ್ಪಿಸಿದರು.
-ಶೋಭಾ ಚೌಹಾನ್
ಪ್ರಾಂಕ್ಫರ್ಟ, ಜರ್ಮನಿ