ಜರ್ಮನಿಯ ಫ್ರಾಂಕ್‌ಫರ್ಟ್ನ ರೈನ್ ಮೈನ್ ಕನ್ನಡ ಸಂಘ ಇತ್ತೀಚೆಗೆ ಗಣೇಶೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಇದೇ ಮೊದಲ ಬಾರಿಗೆ ತಮ್ಮ ಸಂಘದ ಸದಸ್ಯರಿಗಾಗಿ ಬಾಳೆ ಎಲೆ ಊಟವನ್ನು ಏರ್ಪಡಿಸಿತ್ತು. ಇದರ ಜತೆಗೆ ವಿಶೇಷವಾಗಿ ಶ್ವಾಸಯೋಗದ ವತಿಯಿಂದ ‘ಯೋಗಯುಕ್ತ ರೋಗ ಮುಕ್ತರಾಗಲು ಶ್ರೀ ಶ್ರೀ ವಚನಾನಂದ ಸ್ವಾಮಿಗಳಿಂದ ಹಿತನುಡಿಯೊಂದಿಗೆ ಯೋಗದ ತರಬೇತಿ ನಡೆಸಲಾಯಿತು.
ವಂದಿಸುವುದಾದಿಯಲಿ ಗಣನಾಥನ ಎಂದು ನಾವು ನಮ್ಮೆಲ್ಲಾ ಶುಭ ಕಾರ್ಯಗಳಲ್ಲಿ ಗೌರಿಪುತ್ರ ವಿನಾಯಕನನ್ನು ಪೂಜಿಸಿ, ಪ್ರಾರ್ಥಿಸಿಯೇ ಮುಂದುವರೆಯುವುದು ವಾಡಿಕೆ. ಆದಿದೈವ ಗಣೇಶನದ್ದೇ ಹಬ್ಬವಾದರೆ ಸಂತಸ ದುಪ್ಪಟ್ಟಾಗುತ್ತದೆ. ಕರ್ನಾಟಕದಲ್ಲಿ ಡೋಲು, ತಮಟೆ, ಸಾರ್ವಜನಿಕವೇದಿಕೆ, ಸಾಂಸ್ಕೃತಿಕ ಕಾರ್ಯಕ್ರಮ, ಸ್ಪರ್ಧೆಗಳು, ಮನರಂಜನೆ, ಬಗೆಬಗೆ ರೀತಿಯ
ಗಣೇಶನ ಮೂರ್ತಿಗಳು, ಗಣೇಶ ವಿಸರ್ಜನೆ, ವಿಧವಿಧದ ಭಕ್ಷ ಭೋಜ್ಯಗಳು. ಅಹಾ! ಒಂದೆರಡು ದಿನದಲ್ಲಿ ಮುಗಿಯದ ಸಂಭ್ರಮವದು. ಇವೆಲ್ಲವನ್ನು ಜರ್ಮನಿಯಲ್ಲಿ ಸಾಧ್ಯವಾಗಿಸಿದ್ದು ರೈನ್ ಮೈನ್ ಕನ್ನಡ ಸಂಘ.
ಫ್ರಾಂಕ್‌ಫರ್ಟ್‌ನ ಯಕ್ಷಗಾನ ಕಲಾವಿದರಾದ ಶ್ರೀ ಅಜಿತ್ ಪ್ರಭು ತಲ್ಲೂರ್‌ರವರು ಮಾಡಿಕೊಟ್ಟ ಸುಂದರ ಗಣೇಶನ ಮೂರ್ತಿಯನ್ನು ಸುಮುಹೂರ್ತದಲ್ಲಿ ಆರತಿಯೊಂದಿಗೆ ಬರಮಾಡಿ ಕೊಂಡು, ಶಾಸ್ತ್ರೋ.ಕ್ತವಾಗಿ ಶ್ರೀಪತಿಯವರು ಪೂಜೆಯನ್ನು ನೆರವೇರಿಸಿದರು. ಸ್ಮಿತಾ ಜಯಂತ್, ವರುಣ್ ಛಾಯಾಪತಿ, ಪವನ್ ಮದಮಯ್ಯ ರವರ ಸಂಗೀತಕ್ಕೆ ಕೇಳುಗರ
ಕರ್ಣಗಳನ್ನಷ್ಟೇ ಅಲ್ಲ, ಗಣೇಶನೂ ತಲೆದೂಗಿರಬಹುದು. ಇಂಪಾದ ಗಾಯನದ ಜತೆಗೆ ಭರತ ನಾಟ್ಯ ಕಲಾವಿದೆ, ನೃತ್ಯ ಸಂಯೋಜಕಿ ಹಾಗೂ ಮನಶಾಸ್ತ್ರಜ್ಞೆ ಮೇಧಾ ದೀಕ್ಷಿತ್ ಅವರಿಂದ ಗೌರೀಸುತ-ಗಜಾನನನಾದ ಕಥಾಸಾರಾಂಶವುಳ್ಳ ನೃತ್ಯರೂಪಕ ನೋಡುಗರ ಮನನಾಟಿತು. ಕಾರ್ಯಕ್ರಮಕ್ಕೆ ಲೋಕನಾಥ ಚೌಹಾನ್ ರವರು ಎಲ್ಲರನ್ನೂ ಸ್ವಾಗತಿಸಿದರೆ, ವಿಶ್ವನಾಥ ಬಾಳೆಕಾಯಿಯವರು ಹೃತ್ಪೂರ್ವಕ ವಂದನೆಗಳನ್ನು ಸಲ್ಲಿಸಿದರು. ಶ್ರೀಮತಿ ಕೃತಿಕಾ ಹಾಗೂ ವರುಣ್ ಕಾರ್ಯಕ್ರಮವನ್ನು ಬಹಳ ಅಚ್ಚುಕಟ್ಟಾಗಿ ನಡೆಸಿಕೊಟ್ಟರು. ಒಂದು ಸುಂದರ ದಿನ ವಿಘ್ನಹರನ ಪೂಜೆಯೊಂದಿಗೆ ಸಾರ್ಥಕ ಭಾವ ಹೊಮ್ಮಿ ಸಲು ಹಲವಾರು ಸ್ವಯಂ ಸೇವಕರು ಕೈ ಜೋಡಿಸಿದರು.
ಗಣೇಶ ಬಂದ ಬಾಳೆ ಎಲೆ ಊಟ ತಂದ ಹಬ್ಬವೆಂದರೆ ಮಡಿ, ಪೂಜೆ, ಜೊತೆಗೆ ರುಚಿ ರುಚಿಯಾದ ಊಟ, ಈ ಬಾರಿಯ ಗಣೇಶೋತ್ಸವದಲ್ಲಿ ರೈನ್ ಮೈನ್ ಕನ್ನಡ ಸಂಘ ಇದೇ ಮೊದಲ ಬಾರಿಗೆ ಬಾಳೆ ಎಲೆ ಊಟವನ್ನು ಆಯೋಜಿಸಿದ್ದು ಯಶಸ್ವಿಯಾಗಿ ಪೂರೈಸಿದೆ. ಭಾರತದಿಂದ ಬಾಳೆಎಲೆಯನ್ನು ಆಮದು ಮಾಡಿಕೊಂಡು ಥರಥರದ ಅಡುಗೆ ಮಾಡಿ ಇನ್ನೂರ ಐವತ್ತಕ್ಕೂ ಹೆಚ್ಚು ಜನರಿಗೆ ಹಬ್ಬದ ಸವಿಯೂಟ ಬಡಿಸಿದೆ, ಊಟದೊಂದಿಗೆ
ವಾಣಿ ಹಾಗೂ ಶಶಿಕಿರಣ್ ಅವರು ತಯಾರಿಸಿದ
ಪ್ರಸಾದ ಭಕ್ತಿಗೆ ರುಚಿ ಬೆರೆಸಿದಂತಿತ್ತು. ಹಲ ಸದಸ್ಯರು ಇದಕ್ಕಾಗಿ ಶ್ರಮವಹಿಸಿ ಸಂತೃಪ್ತಿದಾಯಕ ಭೋಜನ ಸವಿಯಲು ಸಹಕರಿಸಿದರು.
ಶ್ವಾಸಯೋಗ-ಯೋಗಯುಕ್ತ ರೋಗಮುಕ್ತ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಹರಿಹರ ಪೀಠದ ಮಠಾಧಿಪತಿಗಳಾದ ಜಗದ್ಗುರು ವಚನಾನಂದ ಸ್ವಾಮಿಗಳು ಆಗಮಿಸಿದ್ದು, ತಮ್ಮ ಹಿತನುಡಿಗಳಿಂದ ಯೋಗದ ಲಾಭಗಳ ಬಗ್ಗೆ ವಿವರಿಸಿದರು. ಇವರು ಸಾಮಾಜಿಕ ಕಾರ್ಯಕರ್ತರು ಹಾಗೂ ಫಿಲಾನ್‌ತ್ರೊಫಿಸ್ಟ್ ಕೂಡಾ ಹೌದು, ಇವರು ಸ್ಥಾಪಿಸಿದ ‘ಶ್ವಾಸ ಯೋಗ ಶಾಲೆ’ಯು ಭಾರತದಲ್ಲಿ ಅಷ್ಟೇ ಅಲ್ಲದೆ ವಿಶ್ವಾದ್ಯಂತ ಯೋಗ ಶಿಬಿರಗಳನ್ನು ನಡೆಸುತ್ತಾ ಲಕ್ಷಾಂತರ ಜನರಿಗೆ ಯೋಗದ ಪ್ರಾಚೀನ ಅಭ್ಯಾಸವನ್ನು ಕಲಿಸುತ್ತಿದೆ. ಇವರು ‘ವಿಶ್ವಗುರು’ ಎಂದೇ ಪ್ರಚಲಿತರು. ಗುರುಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಎಲ್ಲರಿಗೂ ದಿನವೂ ಯೋಗ ಮಾಡುವುದನ್ನು ರೂಢಿಸಿಕೊಂಡಲ್ಲಿ ಆರೋಗ್ಯ ವೃದ್ಧಿಸುವುದು, ಜತೆಗೆ ಸುಗಮ ಜೀವನಕ್ಕೆ ದಾರಿಯಾಗುವುದು. ದಿನವೂ ನಮಗಾಗಿ ಒಂದಿಷ್ಟು ನಿಮಿಷಗಳನ್ನು ಮೀಸಲಾಗಿಟ್ಟು ಯೋಗ ‘ಯುಕ್ತ, ರೋಗಮುಕ್ತರಾಗಿ’ ಎಂದಿದ್ದಾರೆ.
ಯೋಗ, ಆರೋಗ್ಯ, ಬಾಳೆ ಎಲೆ ಊಟ ಜತೆಗೆ ಗಣೇಶನ ಬಗ್ಗೆ ನಮಗೆಷ್ಟು ತಿಳಿದಿದೆ ಎಂಬುದನ್ನು ಅರಿಯುವ ರಸಪ್ರಶ್ನೆಗಳು, ಊಟದೊಂದಿಗೆ ಜ್ಞಾನವನ್ನು ಮೆಲುಕು ಹಾಕುವ೦ತಿತ್ತು.
-ಶೋಭಾ ಚೌಹಾನ್ ಫ್ರಾಂಕ್‌ಫರ್ಟ್, ಜರ್ಮನಿ